ರಾಜಸ್ಥಾನದಿಂದ ರೈಲಿನಲ್ಲಿ ಬಂದಿದ್ದು ಮೇಕೆ ಮಾಂಸ: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದ ಜತೆಗೆ ನಾಯಿ ಮಾಂಸವನ್ನು ತರಲಾಗಿದೆ ಎಂದು ಪುನೀತ್ ಕೆರೆಹಳ್ಳಿ ಆರೋಪ ಮಾಡಿದ್ದರು. ಬೆಂಗಳೂರು: ರೈಲು ಮೂಲಕ ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸವಲ್ಲ, ಮೇಕೆ ಮಾಂಸವೆಂದು ಆಹಾರ ಸುರಕ್ಷ|ತೆ ಮತ್ತು ಗುಣಮಟ್ಟ ಇಲಾಖೆ ಖಚಿತಪಡಿಸಿದೆ.ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದ ಜತೆಗೆ ನಾಯಿ ಮಾಂಸವನ್ನು ತರಲಾಗಿದೆ ಎಂದು ಪುನೀತ್ ಕೆರೆಹಳ್ಳಿ ಆರೋಪ ಮಾಡಿದ್ದರು. ಈ ಬೆಳವಣಿಗೆ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿತ್ತು. ಶುಕ್ರವಾರ ಸಂಜೆಯ ವೇಳೆಗೆ ನಡೆದ ಈ ಘಟನೆ ಕೆಲವೇ ನಿಮಿಷಗಳಲ್ಲಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.ವಿವಾದವಾಗುತ್ತಿದಂತೆ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಕೋಟ್ಟು ಮಾಂಸವನ್ನು ವಶಕ್ಕೆ ಪಡೆದು ಅದರ ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಿದ್ದರು. ಅದರ ಪರೀಕ್ಷೆ ನಡೆಸಿದ ಪ್ರಯೋಗಾಲಯದವರು ಅದು ಮೇಕೆ ಮಾಂಸ ಎಂದು ವರದಿ ನೀಡಿದ್ದಾರೆ.ಪ್ರಯೋಗಾಲಯದ ಪರೀಕ್ಷೆಯಲ್ಲಿ ಈ ಮಾಂಸವು ನಾಯಿಯದ್ದಲ್ಲ, ಮೇಕೆಯದ್ದು ಎಂದು ತಿಳಿದುಬಂದಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ರಾಜ್ಯ ಆಯುಕ್ತ ಶ್ರೀನಿವಾಸ್ ಕೆ ಅವರು ಸ್ಪಷ್ಟಪಡಿಸಿದ್ದಾರೆ.ಇದನ್ನು ಸಿರೋಹಿ ಮೇಕೆ ಮಾಂಸ ಎಂದು ಗುರುತಿಸಲಾಗಿದೆ, ಇದು ರಾಜಸ್ಥಾನ ಮತ್ತು ಗುಜರಾತ್‌ನ ಕಚ್-ಭುಜ್ ಪ್ರದೇಶದ ತಳಿಯಾಗಿದೆ. ಈ ತಳಿಯ ಮೇಕೆಗಳು ಮಚ್ಚೆಯುಳ್ಳ ದೇಹ ಮತ್ತು ಸ್ವಲ್ಪ ಉದ್ದವಾದ ಬಾಲವನ್ನು ಹೊಂದಿರುವುದು ವಿಶಿಷ್ಟವಾಗಿದೆ, ಹೀಗಾಗಿ ಈ ಮೇಕೆಗಳು ನಾಯಿಯನ್ನು ಹೋಲುತ್ತವೆ ಎಂದು ತಿಳಿಸಿದ್ದಾರೆ.ಈ ಮೇಕೆಗಳ ಬಳಕೆ ಕಡಿಮೆಯಿದ್ದರೂ, ಉತ್ಪಾದನೆ ಹೆಚ್ಚಾಗಿದೆ. ಹೀಗಾಗಿ ಕೆಲವು ವ್ಯಾಪಾರಿಗಳು ಈ ಮೇಕೆ ಮಾಂಸವನ್ನು ರಾಜಸ್ಥಾನದಿಂದ ಬೆಂಗಳೂರಿಗೆ ರೈಲಿನ ಮೂಲಕ ಸರಬರಾಜು ಮಾಡಿಸಿಕೊಳ್ಳುತ್ತಾರೆಂದು ಎಫ್‌ಎಸ್‌ಎಸ್‌ಎಐ ಮೂಲಗಳು ತಿಳಿಸಿವೆ.